
ಮುಂಬೈ: ಇಂಡಿಯಾಸ್ ಗಾಟ್ ಟ್ಯಾಲೆಂಟ್ ಟಿವಿ ಶೋನಲ್ಲಿ ಪ್ಯಾನಲಿಸ್ಟ್ ಆಗಿ ಸೇರಿಕೊಂಡಿದ್ದ ಖ್ಯಾತ ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ ಸ್ಪರ್ಧಿಯೊಬ್ಬರಿಗೆ ತಂದೆ ತಾಯಿಯ ಬೆಡ್ ರೂಂ ಬಗೆಗಿನ ಅಸಭ್ಯ ಪ್ರಶ್ನೆ ಕೇಳಿ ಭಾರೀ ವಿವಾದಕ್ಕೆ ಕಾರಣವಾಗಿದ್ದಾರೆ.ಇದೀಗ ರಣವೀರ್ ತಮ್ಮ ಅಸಭ್ಯ ಪ್ರಶ್ನೆಗೆ ಕ್ಷಮೆ ಕೇಳಿದ್ದಾರೆ.
ಹೌದು, ರಣವೀರ್ ಟಿವಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ ಕೇಳಬಾರದ ಪ್ರಶ್ನೆ ಕೇಳಿದ್ದಾರೆ. ತಮಾಷೆಯಾಡುವ ಭರದಲ್ಲಿ ರಣವೀರ್ ಸ್ಪರ್ಧಿಯೊಬ್ಬರಿಗೆ ಪೋಷಕರ ಲೈಂಗಿಕ ಕ್ರಿಯೆ ಬಗ್ಗೆ ಪ್ರಶ್ನಿಸಿದ್ದಾರೆ. ನಿಮ್ಮ ಪೋಷಕರು ಪ್ರತಿ ದಿನ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡ್ತೀರಾ? ಅಥವಾ ನೀವು ಒಮ್ಮೆ ಮಾಡಿ, ಅದನ್ನು ಶಾಶ್ವತವಾಗಿ ನಿಲ್ಲಿಸುತ್ತೀರಾ? ಎಂದು ರಣವೀರ್ ಸ್ಪರ್ಧಿಗೆ ಕೇಳಿದ್ದಾರೆ.
ಇಂತಹ ಅಸಹ್ಯ ಪ್ರಶ್ನೆ ಕೇಳಿದ ರಣವೀರ್ ವಿರುದ್ಧ ನೆಟ್ಟಿಗರು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕೂಡಾ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ರಣವೀರ್ ಅಲ್ಹಾಬಾದಿಯಾ ಜೊತೆಗೆ ಹಾಸ್ಯನಟ ಸಮಯ್ ರೈನಾ ವಿರುದ್ಧ ಮುಂಬೈ ಪೊಲೀಸ್ ಆಯುಕ್ತರು ಮತ್ತು ಮಹಾರಾಷ್ಟ್ರ ಮಹಿಳಾ ಆಯೋಗದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದೀಗ ತಮ್ಮ ಹೇಳಿಕೆ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸುತ್ತಲೇ ರಣವೀರ್ ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೇಳಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ನನ್ನ ಹೇಳಿಕೆ ಅನುಚಿತವಾಗಿರಲಿಲ್ಲ, ತಮಾಷೆಯೂ ಆಗಿರಲಿಲ್ಲ. ಹಾಸ್ಯ ನನ್ನ ಶಕ್ತಿ ಅಲ್ಲ. ಕ್ಷಮೆಯಾಚಿಸಲು ನಾನು ಬಂದಿದ್ದೇನೆ. ನಾನು ಈ ರೀತಿ ಮಾತಾಡಬಾರದಿತ್ತು. ಮಾತಾಡಿಬಿಟ್ಟಿದ್ದೇನೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ ಕೇಳಿಕೊಂಡಿದ್ದಾರೆ.

