
‘ಅಭಿಮಾನಿಗಳು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ. ನಿರ್ದೇಶಕ ಪ್ರೇಮ್ ಜೊತೆಗೆ ಖಂಡಿತವಾಗಿಯೂ ಸಿನಿಮಾ ಮಾಡುತ್ತೇನೆ’ ಎಂದು ನಟ ದರ್ಶನ್ ಹೇಳಿದ್ದಾರೆ.
ದರ್ಶನ್ ಹಲವು ದಿನಗಳ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದನ್ನು ಅಪ್‌ಲೋಡ್ ಮಾಡಿದ್ದಾರೆ. ಸಿನಿಮಾಗಳ ಕುರಿತು ಮಾತನಾಡಿರುವ ಅವರು, ‘ಇಷ್ಟು ದಿನ ಕಾದ ನಿರ್ಮಾಪಕರಿಗೆ ಧನ್ಯವಾದಗಳು. ಆ ಕಾರಣಕ್ಕಾಗಿ ಅವರಿಗೆ ಅನ್ಯಾಯ ಮಾಡಬಾರದು. ಸೂರಪ್ಪ ಬಾಬು ಅವರಿಗೆ ನಾನು ಮುಂಗಡ ಹಣ ವಾಪಸ್ ನೀಡಿದ್ದೇನೆ. ಏಕೆಂದರೆ ಅವರು ಸಿನಿಮಾ ಮಾಡಲು ಬಂದಾಗ ಅವರಿಗೆ ಬಹಳ ಕಮಿಟ್‌ಮೆಂಟ್ಸ್ ಇತ್ತು. ಚಿತ್ರರಂಗದ ಸ್ನೇಹಿತರೊಬ್ಬರು ಅವರನ್ನು ಕರೆದುಕೊಂಡು ಬಂದಾಗ ನಾನು ಸಿನಿಮಾ ಮಾಡಲು ಒಪ್ಪಿಕೊಂಡಿದ್ದೆ. ಈಗ ಬಹಳ ಸಮಯ ಕಳೆದು ಹೋಗಿದೆ. ಈ ಸಮಯದಲ್ಲಿ ಅವರ ದುಡ್ಡನ್ನು ನಾನು ಹಿಡಿದಿಟ್ಟುಕೊಂಡರೆ ಅವರಿಗೆ ಇನ್ನೂ ಸಮಸ್ಯೆ ಆಗಲಿದೆ. ಹೀಗಾಗಿ ಕಮಿಟ್‌ಮೆಂಟ್ಸ್ ತೀರಿಸಿಕೊಳ್ಳಿ, ಮುಂದೆ ಒಳ್ಳೆಯ ವಿಷಯಗಳು ಸಿಕ್ಕಿದಾಗ ಸಿನಿಮಾ ಮಾಡೋಣ ಎಂದಿದ್ದೇನೆ. ನಾನು ಪ್ರೇಮ್ ಖಂಡಿತವಾಗಿಯೂ ಸಿನಿಮಾ ಮಾಡುತ್ತೇವೆ. ಇದು ರಕ್ಷಿತಾ ಅವರ ಆಸೆ. ದರ್ಶನ್ ಬೇರೆ ಭಾಷೆಗೆ ಹೋಗುತ್ತಾರೆ ಎನ್ನುವ ಊಹಾಪೋಹವಿದೆ. ಕನ್ನಡದಲ್ಲೇ ಇಷ್ಟೊಂದು ಪ್ರೀತಿ ಅಭಿಮಾನ ಇರುವಾಗ ಸುಮ್ಮನೆ ಎಲ್ಲಿಗೆ ಹೋಗಲಿ. ಸಾಯುವವರೆಗೂ ಇಲ್ಲಿಯೇ ಇರುತ್ತೇನೆ. ಕನ್ನಡ ಸಿನಿಮಾವನ್ನೇ ಮಾಡುತ್ತೇನೆ’ ಎಂದಿದ್ದಾರೆ.

